Breaking
Sun. Dec 22nd, 2024

ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳಿಗೆ ಬಿಜೆಪಿ-ಜೆಡಿಎಸ್ ವಿರೋಧ: ಸಿ.ಎಂ.ಆಕ್ರೋಶ

ಬಿಜೆಪಿ ಸಮಾಜದಲ್ಲಿರುವ ಅಸಮಾನತೆಯ ಲಾಭ ಪಡೆಯುತ್ತಿದೆ: ಸಿ‌ಎಂ

ಅಭಿವೃದ್ಧಿ ನಿಮ್ಮ ಕಣ್ಣ ಮುಂದಿದೆ: ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿ ಬುರುಡೆ ಬಿಡುತ್ತಿದೆ

ಜಿ.ಎಸ್.ಪಾಟೀಲರಿಗೆ ಮಂತ್ರಿ ಆಗುವ ಅರ್ಹತೆ ಇದೆ: ಮುಂದೆ ನೋಡೋಣ: ಸಿ.ಎಂ

ಗದಗ್ (ರೋಣಾ) ಡಿ 15: ನಮ್ಮ ಸರ್ಕಾರ ಜಾರಿ ಮಾಡಿರುವ ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮಗಳಿಗೆ ಬಿಜೆಪಿ-ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ರೋಶ ವ್ಯಕ್ತಪಡಿಸಿದರು. 

ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದ 200 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ, ಸಿರಿ ದಾನ್ಯ ಉತ್ಪಾದನೆಯ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1,20,000 ಕೋಟಿ ಹಣವನ್ನು ಈ ವರ್ಷ ರಾಜ್ಯ ಸರ್ಕಾರ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಇದಲ್ಲದೆ 52000 ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ನೇರವಾಗಿ ಹಾಕುತ್ತಿದ್ದೇವೆ. ಹೀಗಿದ್ದೂ ಬಿಜೆಪಿ ಬುರುಡೆ ಬಿಡುತ್ತಿದೆ. ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಪದೇ ಪದೇ ಸುಳ್ಳು ಹೇಳಿ ಅವರ ಸುಳ್ಳನ್ನು ಸತ್ಯ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ರಾಜ್ಯದ ಜನತೆ ಇವರ ಸುಳ್ಳು ನಂಬುವಷ್ಟು ಮೂರ್ಖರಲ್ಲ ಎಂದರು. 

ರಾಜ್ಯದ 4.5 ಕೋಟಿ ಮಂದಿ ಗ್ಯಾರಂಟಿ ಯೋಜನೆಗಳ ನೇರ ಲಾಭ ಪಡೆಯುತ್ತಿದ್ದಾರೆ. ಇದಲ್ಲದೆ ರಸ್ತೆ, ನೀರು, ಕೃಷಿ, ನೀರಾವರಿ ಯೋಜನೆಗಳಿಗೂ ಸಾವಿರಾರು ಕೋಟಿ ಖರ್ಚು ಮಾಡುತ್ತಿದ್ದೇವೆ. 

ಸಮಾಜ ಕಲ್ಯಾಣಕ್ಕೆ, ದಲಿತ ಸಮುದಾಯದ ಪ್ರಗತಿಗೆ, ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಸಾವಿರ ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ.

ಆದರೆ ಬಿಜೆಪಿ ಜಾತಿ-ಧರ್ಮದ ನಡುವೆ ದ್ವೇಷ ಹರಡಿ, ಜನರನ್ನು ವಿಭಜಿಸುವ ಏಕೈಕ ರಾಜಕಾರಣದಲ್ಲಿ ತೊಡಗಿದೆ ಎಂದರು.

ಬಸವಣ್ಣ, ಅಂಬೇಡ್ಕರ್, ಗಾಂಧಿ, ಬುದ್ಧ ಎಲ್ಲರ ಆಶಯದಂತೆ ಸಮ ಸಮಾಜವನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿ, ಜಾರಿ ಮಾಡುತ್ತಿದೆ. ಆದರೆ ಸಮಾಜದಲ್ಲಿರುವ ಅಸಮಾನತೆಯ ಅತಿಹೆಚ್ಚು ಲಾಭ ಪಡೆಯುತ್ತಿರುವ ಬಿಜೆಪಿ, ಸಮಾನತೆಯ ವಿರೋಧಿಯಾಗಿದೆ ಎಂದರು. 

ಗಜೇಂದ್ರಘಡದ ಅತ್ತೆ ಸೊಸೆ ಇಬ್ಬರೂ ಗೃಹಲಕ್ಷ್ಮಿ ಹಣವನ್ನು ಉಳಿಸಿ ಅದರಲ್ಲಿ ಬೋರ್ ವೆಲ್ ಕೊರೆಸಿ ಸಮಾಜಕ್ಕೆ ಮಾದರಿ ಆಗಿದ್ದಾರೆ ಎಂದು ಸ್ಮರಿಸಿದ ಸಿಎಂ ಅತ್ತೆ-ಸೊಸೆ ಜೋಡಿಗೆ ಅಭಿನಂದನೆ ಸಲ್ಲಿಸಿದರು. 

ಇಡೀ ಜಗತ್ತಿನಲ್ಲಿ ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಹೆಚ್ಚಿನ ನಾರಿನ ಅಂಶ ಇರುವ ಸಿರಿದಾನ್ಯ ಬಳಸುವುದರಿಂದ ಶರೀರದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ದೇಹಕ್ಕೆ ಅಗತ್ಯವಾದ ಪ್ರೋಟೋನ್ ಹೇರಳವಾಗಿ ಸಿಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಸಿರಿದಾನ್ಯ ಬೆಳೆಯುವ ರೈತರಿಗೆ ನಾನಾ ರೀತಿಯ ಅನುಕೂಲ ಮಾಡಿಕೊಡುತ್ತಿದೆ ಎಂದರು. 

ಜೆ.ಎಸ್.ಪಾಟೀಲರು ಮಂತ್ರಿ ಆಗಲು ಅರ್ಹರು

 

ಜೆ.ಎಸ್.ಪಾಟೀಲ್ ಅವರು ನನ್ನ ಬಳಿ ಬರುವುದು ರೋಣಾ ಮತ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮಾತ್ರ. ಮುಂದಿನ ಬಜೆಟ್ ನಲ್ಲಿ ಕ್ಷೇತ್ರಕ್ಕೆ ಕೃಷಿ ಕಾಲೇಜು ನೀಡುವಂತೆ ಪಾಟೀಲರು ಒತ್ತಾಯಿಸಿದ್ದಾರೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಕ್ಷೇತ್ರದ ಜನತೆ ಒತ್ತಾಯಿಸಿದ್ದಾರೆ. ಎರಡೂ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು. ಜೆ.ಎಸ್.ಪಾಟೀಲರಿಗೆ ಮಂತ್ರಿ ಆಗುವ ಎಲ್ಲಾ ಅರ್ಹತೆಗಳಿವೆ. ಮುಂದೆ ನೋಡೋಣ ಎಂದು ಸಿಎಂ ಭರವಸೆ ನೀಡಿದರು.

Related Post

Leave a Reply

Your email address will not be published. Required fields are marked *